ಇಂದು ಏಪ್ರಿಲ್ 24. ಅಂದರೆ ಸಾಕು ನಮ್ಮ ಎಲ್ಲಾ ಕನ್ನಡಿಗರಿಗೂ ನೆನಪಾಗುವುದು ನಮ್ಮ ಅಣ್ಣಾವ್ರು. ಕರ್ನಾಟಕದಲ್ಲಿ ಸುಮಾರು ಅಣ್ಣಂದಿರು ಹುಟ್ಟಿದ್ದಾರೆ, ಹುಟ್ಟುತ್ತಿದ್ದಾರೆ, ಮುಂದೆಯೂ ಹುಟ್ಟುತ್ತಾರೆ. ಆದರೆ ಇಡೀ ಕರ್ನಾಟಕ ಅಣ್ಣಾವ್ರು ಎಂದು ಕರೆಯುವುದು ಅವರೊಬ್ಬರನ್ನು ಮಾತ್ರ ಅವರೇ ಕನ್ನಡಿಗರ ಕಣ್ಮಣಿಯಾಗಿ, ಇಂದು ಧ್ರುವತಾರೆಯಾಗಿ ನಮಗೆ ನೆನಪಾಗುವ ಡಾ. ರಾಜ್‌ಕುಮಾರ್‌ರವರು. ಇಂದು ಅವರ ಜನ್ಮದಿನ, ಈ ಸಂದರ್ಭದಲ್ಲಿ ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸುವ ಸಲುವಾಗಿ ಬಿಲಿಯನ್ ವಾಯ್ಸ್ ತಂಡದಿಂದ ಈ ಲೇಖನವನ್ನು ಅರ್ಪಿಸುತ್ತಿದ್ದೇವೆ.
ಡಾ. ರಾಜ್ ಎಂದರೆ ಕನ್ನಡ, ಕನ್ನಡ ಎಂದರೆ ಡಾ. ರಾಜ್ ಎರಡೂ ಒಂದೇ ನಾಣ್ಯದ ಎರಡು ಮುಖಗಳೋ, ಇಲ್ಲವೇ ಎರಡೂ ಒಂದೇ ಆತ್ಮವೋ, ಇಲ್ಲ ಶಕ್ತಿಯೋ ವಿವರಿಸುವುದು ಕಷ್ಟ. ಏಕೆಂದರೆ ಕನ್ನಡ ಮತ್ತು ರಾಜಣ್ಣನವರ ಸಂಬಂಧ ಅಷ್ಟರ ಮಟ್ಟಿಗಿನದು. ಗೋಕಾಕ್ ಚಳುವಳಿಗೆ ಧುಮುಕಿದಾಗ ನೀಡಿದ ಮಾಧ್ಯಮ ಹೇಳಿಕೆಯಲ್ಲಿಯೇ ಅವರು ಹೀಗೆ ಹೇಳಿಕೊಂಡಿದ್ದಾರೆ “ನನ್ನ ಹುಟ್ಟು ನಾಡಾದ ಕರ್ನಾಟಕ, ನನ್ನ ತಾಯ್ನುಡಿಯಾದ ಕನ್ನಡ, ಎರಡು ನನ್ನ ರಕ್ತದ ಭಾಗವಾಗಿದೆ” ಎಂದು. ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ ಭಾಷೆ. ಆದಿ ಕವಿ ಪಂಪನಿಂದ ಹಿಡಿದು ಇಂದು ನಿನ್ನೆ ಕವಿಯಾದವರ ಕೈಯಿಂದಲೂ ಹೊಗಳಿಸಿಕೊಂಡ ಭಾಷೆ, ನಮ್ಮ ಅಣ್ಣಾವ್ರ ಅಭಿನಯದಲ್ಲಿ, ದನಿಯಲ್ಲಿ ಹೊಗಳಿಸಿಕೊಂಡಾಗ ದೇವಾತಾರ್ಚನೆಯಲ್ಲಿ ಭಾಗಿಯಾದ ಆಸ್ತಿಕರಂತೆ ಕನ್ನಡದ ಜನ ಧನ್ಯತೆಯನ್ನು ಅನುಭವಿಸಿದ್ದಾರೆ. ಈಗಲೂ ಅನುಭವಿಸುತ್ತಿದ್ದಾರೆ.
“ನಾವಾಡುವ ನುಡಿಯೇ ಕನ್ನಡ ನುಡಿ”, “ಜೇನಿನ ಹೊಳೆಯೋ, ಹಾಲಿನ ಮಳೆಯೋ”, “ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು” ಇತ್ಯಾದಿ ನಾಡು ನುಡಿಯನ್ನು ಹೊಗಳುವ ಹಾಡುಗಳು ಅವರ ಅಭಿನಯದಲ್ಲಿ ಮತ್ತು ದನಿಯಲ್ಲಿ ಮೂಡಿ ಬಂದಾಗ ಅದು ಹೃದಯದಿಂದ ಹೃದಯಕ್ಕೆ ಹರಿಯುವ ಭಾವನೆಯ ಝರಿಯಾಗಿರುತ್ತದೆ. ಏಕೆಂದರೆ ಅವರ “ಹೃದಯದಲಿ ಓಡುವ ನದಿಯೇ ಕನ್ನಡ” ವಾಗಿತ್ತು.
ಕನ್ನಡ ಮೊದಲ ರಾಜ “ಮಯೂರ”, ಕನ್ನಡದ ಚಕ್ರವರ್ತಿ “ಕೃಷ್ಣದೇವರಾಯ”, ಅರ್ಧ ಭಾರತವನ್ನು ಆಳಿದ ಹರ್ಷವರ್ಧನನ್ನು ಜಯಿಸಿದ “ಇಮ್ಮಡಿ ಪುಲಿಕೇಶಿ”, “ರಣಧೀರ ಕಂಠೀರವ”, ಹೀಗೆ ಕನ್ನಡದ ಪ್ರಮುಖ ರಾಜರನ್ನು ನೆನಪಿಸಿಕೊಳ್ಳಲು ನಮಗೆ ರಾಜ್‌ಕುಮಾರ್‌ರವರೇ ಬೇಕು. ಕನ್ನಡವನ್ನು ಹೇಗೆ ಸ್ಪಷ್ಟವಾಗಿ ಉಚ್ಛರಿಸಬೇಕು ಮತ್ತು ಮಾತನಾಡಬೇಕು ಎಂದೇನಾದರೂ ಮಾದರಿ ತೋರಿಸಬೇಕು ಎಂದರೆ ಅವರ ಧ್ವನಿಗಿಂತ ಬೇರೆ ಧ್ವನಿ ಬೇಕೆ ನಮಗೆ.
ಸುಮಾರು ಜನ ರಾಜ್‌ಕುಮಾರ್‌ರವರ ಕುರಿತು ಒಂದು ದೂರು ನೀಡುತ್ತಾರೆ. ರಾಜ್‌ಕುಮಾರ್ ಏನು ಮಾಡಿದ್ದಾರೆ? ಏನು ಮಾಡಿದರು? ಎಂಬ ಪ್ರಶ್ನೆಗಳನ್ನು ಅವರು ಕೇಳುತ್ತಾರೆ. ಅದಕ್ಕೆ ಉತ್ತರಗಳನ್ನು ಹೀಗೆ ನೀಡಬಹುದು.
*ಈಗ ರಾಜ್ಯದಲ್ಲಿ ಸುಮಾರು ಜನ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಸುಮಾರು ಜನ ಭಾಷಾಂತರ, ಬರವಣಿಗೆ, ಆಪ್ ಅಭಿವೃದ್ಧಿ ಹೀಗೆಂದು, ಸುಮಾರು ಜನ ಕನ್ನಡವನ್ನೇ ಓದಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಇವರೆಲ್ಲರೂ ಪ್ರಾತಃಕಾಲದಲ್ಲಿ ಸ್ಮರಿಸಬೇಕಾದವರ ಪಟ್ಟಿಯಲ್ಲಿ ರಾಜ್‌ಕುಮಾರ್ ಅವರನ್ನು ಸಹ ಸೇರಿಸಿಕೊಳ್ಳಬೇಕು. ಏಕೆಂದರೆ 1980 ರ ಅವಧಿಯಲ್ಲಿ ಅಂದಿನ ರಾಜ್ಯ ಸರ್ಕಾರ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿತ್ತು. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಈ ಮೂರು ಭಾಷೆಗಳನ್ನು ನಮ್ಮ ರಾಜ್ಯದಲ್ಲಿ ಭೋದನೆ ಮಾಡುವುದು ಇದರ ಉದ್ದೇಶವಾಗಿತ್ತು. ಆಗ ಕೆಲವೊಂದು ಅಲ್ಪಸಂಖ್ಯಾತ ಭಾಷಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ರಾಜ್ಯ ಸರ್ಕಾರ ಆ ಅಲ್ಪ ಸಂಖ್ಯಾತ ಭಾಷಿಕ ಸಮುದಾಯಗಳನ್ನು ಮನವೊಲಿಸಲು ಹೋಗಿ, ಬಹುಸಂಖ್ಯಾತರಾದ ಕನ್ನಡ ಭಾಷಿಕರಿಗೆ ಅನ್ಯಾಯ ಮಾಡುವ ನಿರ್ಧಾರಕ್ಕೆ ಬಂದಿತ್ತು. ಇದರ ಪರಿಣಾಮ ಸಂಸ್ಕೃತವು ಸಹ ಮುಖ್ಯವಾಹಿನಿಗೆ ಬರುವ ಪ್ರಮೇಯ ಏರ್ಪಡುವ ಸಾಧ್ಯತೆ ಇತ್ತು. ಕನ್ನಡವನ್ನು ಹೇಳುವವರು ಕೇಳುವವರು ಯಾರು ಇಲ್ಲ ಎಂಬ ಸನ್ನಿವೇಶ ಹುಟ್ಟಿಕೊಂಡಿತು. ಅಸಲಿಗೆ ಕನ್ನಡ ಭಾಷೆಯನ್ನು ಸರ್ಕಾರವೇ ಕೊಲ್ಲಲು ಸಿದ್ಧವಾಗಿತ್ತು. ಆಗ ಸಾಹಿತಿ ವಿ.ಕೃ.ಗೋಕಾಕ್ ನೇತೃತ್ವದ ಆಯೋಗವು ಕನ್ನಡವನ್ನು ಏಕೆ ಪ್ರಥಮ ಭಾಷೆಯನ್ನಾಗಿ ಮಾಡಬೇಕೆಂದು ಒಂದು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರು. ಇದಕ್ಕೆ ಅವರದೇ ಹೆಸರು ಬಂದಿತು. ಆಗ ಈಗಿನಂತೆ ಫೇಸ್‌ಬುಕ್, ವಾಟ್ಸಪ್, ಟ್ವಿಟರ್ ಇರಲಿಲ್ಲ. 24 ಗಂಟೆ ಸುದ್ದಿವಾಹಿನಿಗಳು ಇರಲಿಲ್ಲ. ಕೆಲವು ಸಾಹಿತಿಗಳು, ಶಿಕ್ಷಕರು ಮತ್ತು ಉಪನ್ಯಾಸಕರು ಹಾಗೂ ಬುದ್ಧಿಜೀವಿಗಳು ಇದರ ಕುರಿತಾಗಿ ಬಂಡಾಯ ಎದ್ದರೂ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಆಗಲಿಲ್ಲ. ಜೊತೆಗೆ ಇಂತಹ ಪ್ರತಿಭಟನೆ ನಡೆಯುತ್ತಿದೆ ಎಂದು ಜನರಿಗೆ ಗೊತ್ತೇ ಇರಲಿಲ್ಲ. ಆಗ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಸಾಹಿತಿಗಳು, ಪಾಟೀಲ್ ಪುಟ್ಟಪ್ಪ, ಜಿ ನಾರಾಯಣ ಕುಮಾರ್ ನೇತೃತ್ವದಲ್ಲಿ ತೀರ್ಮಾನ ಮಾಡಿದ್ದೇನೆಂದರೆ, ಚಳುವಳಿಗೆ ಡಾ. ರಾಜ್‌ಕುಮಾರ್‌ರವರನ್ನು ಕರೆತಂದರೆ ಜನ ಬೆಂಬಲ ಪಡೆದು, ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡು, ‘ಕವಿರತ್ನ ಕಾಳಿದಾಸ’ ಚಿತ್ರೀಕರಣಕ್ಕಾಗಿ ಮದ್ರಾಸಿನಲ್ಲಿದ್ದ ಅಣ್ಣಾವ್ರನ್ನು ಭೇಟಿ ಮಾಡಿದರು.
ಆಗ ಅಣ್ಣಾವ್ರು ಮರುಮಾತನಾಡದೆ ನಾಡು ನುಡಿಗಾಗಿ ನಾನು ಯಾವುದೇ ಕ್ಷಣದಲ್ಲಿ ಬಂದು ಹೋರಾಡುತ್ತೇನೆ ಎಂದು ಸಹಮತ ಸೂಚಿಸಿದರು. ಮೊದಲು ಈ ಕುರಿತಾಗಿ ಪತ್ರ ಬರೆದರು ಡಾ.ರಾಜ್. ಆನಂತರ ಸಕ್ರಿಯವಾಗಿ ಹೋರಾಟಕ್ಕೆ ಧುಮುಕಿದರು. ಆಮೇಲೆ ನಡೆದಿದ್ದು ಇತಿಹಾಸ, ಬೆಳಗಾವಿಯಿಂದ ಬೆಂಗಳೂರಿನವರೆಗೆ ನಡೆದ ಆ ಐತಿಹಾಸಿಕ ಜಾಥ ಸರ್ಕಾರದಿಂದ ಕಡೆಗಣಿಸಲ್ಪಟ್ಟಿದ್ದ ಕನ್ನಡಕ್ಕೆ ಗೌರವವನ್ನು ತಂದು ಕೊಡುವ ಜಾಥವಾಯಿತು.
ಡಾ.ರಾಜ್ ಯಾವಾಗ ಚಳುವಳಿಗೆ ಬಂದರೋ ಆಗ ಇಡೀ ಚಿತ್ರರಂಗ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿ ಅವರನ್ನು ಹಿಂಬಾಲಿಸಿತು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಬಂದರು. ಆಗ ಅವರು ಭಾಷಣದಲ್ಲಿ ನಾಡು ನುಡಿಗೆ ನೀಡಿದ ಮನ್ನಣೆಯು ಜನರಿಗೆ ತಲುಪಿ, ಚಳುವಳಿ ಉಗ್ರ ಸ್ವರೂಪ ಪಡೆಯಿತು. ಇದರ ಪರಿಣಾಮದ ಒಂದು ಉದಾಹರಣೆಯನ್ನು ನೀಡಬೇಕು. ಬೆಂಗಳೂರಿಗೆ ಜಾಥ ತಲುಪಿದಾಗ ಅಭಿಮಾನಿಗಳು ಭಾವೋದ್ರೇಕಕ್ಕೆ ಒಳಗಾಗಿ ಏನಾದರು ಮಾಡಬಹುದು ಎಂದು ಪೋಲಿಸರು ಮೆರವಣಿಗೆ ಮುಂದಾಳುಗಳ ಮನವೊಲಿಸಿ ಡಾ.ರಾಜ್‌ಕುಮಾರ್‌ರವರನ್ನು ಪೋಲಿಸ್ ವಾಹನದಲ್ಲಿ ಭದ್ರತೆಯ ಜೊತೆಗೆ ಭಾಷಣ ನಡೆಯುವ ಜಾಗಕ್ಕೆ ಕರೆದೊಯ್ಯುತ್ತೇವೆ ಎಂದು ಕೇಳಿಕೊಂಡರು. ಇದಕ್ಕೆ ಅಣ್ಣಾವ್ರು ಸಹ ಒಪ್ಪಿಕೊಂಡರು. ಆಗ ಮೆರವಣಿಗೆ ವಾಹನ ಬಿಟ್ಟು ಪೋಲಿಸ್ ವಾಹನ ಏರಿದ ಅಣ್ಣಾವ್ರನ್ನು ನೋಡಿ ಯಾರೋ ಅಣ್ಣಾವ್ರ ಬಂಧನವಾಯಿತು ಎಂದು ಗಾಳಿ ಸುದ್ದಿ ಹಬ್ಬಿಸಿ ಬಿಟ್ಟರು.
ಆಗ ಶುರುವಾಯಿತು ನೋಡಿ, ಬೆಂಗಳೂರಿನ ಬೀದಿಗಳಲ್ಲಿ ಉಗ್ರ ತಾಂಡವ. ಎಲ್ಲೆಡೆ ಕಾನೂನು ಸುವ್ಯವಸ್ಥೆ ಕೈತಪ್ಪಿ ಹೋಯಿತು. ಮೆರವಣಿಗೆಯ ಮುಂದಾಳುಗಳಲ್ಲಿ ಕೆಲವರು ಓಡಿ ಹೋಗಿ ಅಕಾಶವಾಣಿ ಕೇಂದ್ರ ತಲುಪಿದರು. ಆಗ ಆ ಕಾಲಕ್ಕೇ ಆಕಾಶವಾಣಿ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಿತು. ಅಣ್ಣಾವ್ರನ್ನು ಭದ್ರತೆಯ ದೃಷ್ಟಿಯಿಂದ ಪೋಲಿಸ್ ವಾಹನದಲ್ಲಿ ಕರೆದೊಯ್ಯಲಾಗಿದೆಯೇ ಹೊರತು ಬಂಧಿಸಿ ಅಲ್ಲ. ಅಭಿಮಾನಿ ದೇವರುಗಳು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಬಿತ್ತರಿಸಲಾಯಿತು. ಅಕಾಶವಾಣಿ ಈ ಸಂದೇಶವನ್ನು ಅಂದು ಪದೇ ಪದೇ ಪ್ರಸಾರ ಮಾಡಿ ದಾಖಲೆ ಮಾಡಿತು. ಕಡೆಗೂ ಸರ್ಕಾರ ಗೋಕಾಕ್ ವರದಿಯನ್ನು ಅಂಗೀಕರಿಸಿತು. ಅಂಗೀಕರಿಸುವಂತೆ ಮಾಡಿದ್ದು, ಅಣ್ಣಾವ್ರ ನಾಯಕತ್ವ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಆದ್ದರಿಂದ ಇಂದು ಕನ್ನಡ ಮಾಧ್ಯಮ ಉಳಿದಿದೆ, ಕನ್ನಡ ಕಲಿತವರು ಮತ್ತು ಕನ್ನಡ ಕಲಿಸುವವರು ಸಹ ಉಳಿದಿದ್ದಾರೆ. ಇಲ್ಲವಾದಲ್ಲಿ ಕನ್ನಡ ಕಲಿಸುವವರನ್ನು ಸ್ಪೋಕನ್ ಕನ್ನಡ ತರಗತಿಗಳಲ್ಲಿ ಮಾತ್ರ ನೋಡಬೇಕಾಗುತ್ತಿತ್ತೇನೋ. ನನ್ನಂತಹ ಕನ್ನಡ ಭಾಷೆಯನ್ನು ಅವಲಂಬಿಸಿರುವ ಉದ್ಯೋಗ ಮಾಡುವ ಲಕ್ಷಾಂತರ ಜನರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮ್ಮ ಅಣ್ಣಾವ್ರಿಗೆ ಋಣಿಗಳಾಗಿದ್ದೇವೆ.
ಕನ್ನಡಕ್ಕೆ 2000 ವರ್ಷಗಳ ಇತಿಹಾಸವಿದ್ದರೂ, ಇಡೀ ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಎಲ್ಲರನ್ನೂ ಒಗ್ಗೂಡಿಸಲು ಮಹಾನ್ ಸಾಮ್ರಾಟರಿಂದಲೇ ಆಗಲಿಲ್ಲ. ಅಲ್ಲದೆ ಅವರೆಲ್ಲರೂ ತಮ್ಮ ರಾಜ್ಯವನ್ನು ಕಾಪಾಡಲು ನಾಯಕತ್ವವಹಿಸಿದ್ದರೇ ಹೊರತು. ಭಾಷೆಯನ್ನು ಉಳಿಸಲು ನಾಯಕತ್ವವಹಿಸಲಿಲ್ಲ. ಆದರೆ ಭಾಷೆಯನ್ನು ಉಳಿಸಲು ನಾಯಕನಾಗಿ, ರಾಜ್ಯದ ಮೂಲೆ ಮೂಲೆಯಲ್ಲಿನ ಜನರಿಗೆ ಭಾಷೆಯ ಮಹಿಮೆಯನ್ನು ಸಾರಿದ್ದು ನಮ್ಮ ರಾಜಕುಮಾರ್. ಅದಕ್ಕೆ ಅವರನ್ನು ಕನ್ನಡದ ರಾಯಭಾರಿ ಎಂದು ಕರೆದಿದ್ದು. ಇದಕ್ಕಾಗಿಯೇ ಅಲ್ಲವೇ ಗೂಗಲ್ ಸಹ ತನ್ನ ಡೂಡಲ್‌ನಲ್ಲಿ ಪ್ರಕಟಿಸಿದ ಮೊದಲ ಕನ್ನಡಿಗ ಎಂಬ ಹೆಮ್ಮೆ ನಮ್ಮ ರಾಜ್‌ಕುಮಾರ್‌ರವರ ಪಾಲಾಗಿದ್ದು.
ಎನ್‌ಟಿಆರ್, ಎಎನ್‌ಆರ್, ಎಂಜಿಆರ್, ಕಮಲ್ ಹಾಸನ್ ಯಾರು ಕರೆದರು ಕನ್ನಡವನ್ನು ಬಿಟ್ಟು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದು ನಮ್ಮ ಅಣ್ಣಾವ್ರು. ಕೊನೆಗೆ ಅಮಿತಾಬ್ ಬಚ್ಚನ್ ಬಂದು ನಮ್ಮ ಸಿನಿಮಾದಲ್ಲಿ ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳಿ ನಿಮ್ಮ ಪೆಟ್ಟಿಗೆಯನ್ನು ಹೊರುವ ದೃಶ್ಯವನ್ನಾದರೂ ಸರಿ ಮಾಡೋಣ (ಕೂಲಿ ಚಿತ್ರದಲ್ಲಿ) ಎಂದಾಗ ಅದಕ್ಕೂ ಸಹ ಅಣ್ಣಾವ್ರು ಒಪ್ಪಲಿಲ್ಲ. ಇವರ ಮೇಲೆ ಅಭಿಮಾನದಿಂದ ಪೃಥ್ವಿರಾಜ್ ಕಪೂರ್ ಅಂತಹ ಮೇರು ನಟ ಹಿಂದಿಯಿಂದ ಕನ್ನಡಕ್ಕೆ ಬಂದು ನಟಿಸಿ ಕನ್ನಡದಲ್ಲಿಯೇ ಡಬ್ಬಿಂಗ್ ಸಹ ಮಾಡಿದರು.
ಒಟ್ಟಾರೆಯಾಗಿ ಹೇಳಬೇಕೆಂದರೆ ರಾಜ್‌ಕುಮಾರ್‌ರವರು ಕಲೆಗಾಗಿ ಬದುಕಿದ ಜೀವ. ಅವರ ಕಲೆಯನ್ನು ವ್ಯಕ್ತಪಡಿಸುವ ಭಾಷಾ ಮಾಧ್ಯಮವನ್ನು ಸಹ ಅವರು ಕಲೆಯ ಆತ್ಮ ಮತ್ತು ಜೀವ ಎಂದು ಬಗೆದರು. ರಾಜ್ ಇಡೀ ಜೀವನ ಧೂಮಪಾನ ಮತ್ತು ಮದ್ಯಪಾನ ಮಾಡಲಿಲ್ಲ, ಪ್ರೋತ್ಸಾಹಿಸಲಿಲ್ಲ ಮತ್ತು ಅವರ ಚಿತ್ರಗಳಲ್ಲಿ ಬರುವ ಪಾತ್ರಗಳಲ್ಲಿ ಸಹ ಧೂಮಪಾನ ಮತ್ತು ಮದ್ಯಪಾನ ಮಾಡಲಿಲ್ಲ. ಹೆಣ್ಣು ಮಕ್ಕಳನು ಬೈಯ್ಯಲಿಲ್ಲ, ಹೆಂಗಸರಿಗೆ ಅಪಮಾನವಾಗುವಂತಹ ಕೆಟ್ಟ ದೃಶ್ಯಗಳನ್ನು ಇರಿಸಲಿಲ್ಲ. ಯಾರಾದರೂ ಕೆಟ್ಟ ಬೈಗುಳಗಳನ್ನು ಸಿನಿಮಾದಲ್ಲಿ ಬರೆದರೆ ಅವರನ್ನು ಕರೆದು ಹಾಗೆ ಬರೆಯಬೇಡಿ ಎಂದು ಗದರಿಸುವಷ್ಟು ಹಿರಿತನ ಇದ್ದದ್ದು, ಅವರಿಗೆ ಮಾತ್ರ. ಮಹಿಳೆಯರಿಗೆ ಮೊದಲು ಟಿಕೆಟ್ ಕೊಟ್ಟು, ಉಳಿದಿದ್ದರೆ ಪುರುಷರಿಗೆ ಕೊಡುವ ಪದ್ಧತಿ ಇದ್ದದ್ದು ಬಹುಶಃ ನಮ್ಮ ಅಣ್ಣಾವ್ರ ಸಿನಿಮಾಗಳಿಗೆ ಮಾತ್ರ. ಚಲನಚಿತ್ರದ ನಾಯಕನಾಗಿ ಆರಂಭಿಸಿ, ಗಾಯಕನಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಕೊನೆಗೆ ನಮ್ಮ ಭಾಷೆ ಕನ್ನಡದ ರಾಯಭಾರಿಯಾಗಿ ಸಹ ಜೀವಿಸಿ ಇಂದು ಅಮರವಾಗಿರುವ ನಮ್ಮ ಅಣ್ಣಾವ್ರಿಗೆ ಇದೇ ನಮ್ಮ ನುಡಿನಮನ. ಕನ್ನಡ ಭಾಷೆ ಇರುವಷ್ಟು ದಿನ ಡಾ. ರಾಜ್‌ಕುಮಾರ್ ಇರುತ್ತಾರೆ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ.
ಮತ್ತೆ ಹುಟ್ಟಿ ಬಾ ಅಣ್ಣ,,,,,,
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.
(ಚಿತ್ರಗಳ ಕೃಪೆ: ಸಂಗ್ರಹಿತ, ಇಂಟರ್‌ನೆಟ್)
April 24, 2018 — magnon