ನದಿಗಳ ಜೋಡಣೆಗೆ ಇದು ಸಕಾಲವೇ?

ಭಾರತ ಸಾಂಸ್ಕೃತಿಕವಾಗಿಯಷ್ಟೇ ಅಲ್ಲ, ಭೌಗೋಳಿಕವಾಗಿ ಸಹ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದೆ. ನಮ್ಮ ದೇಶದ ಉತ್ತರ ಭಾಗದಲ್ಲಿ ವರ್ಷದ ಎಲ್ಲಾ ದಿನಗಳು ಉಕ್ಕಿ ಹರಿಯುವ ನದಿಗಳನ್ನು ನಾವು ನೋಡಬಹುದು. ಅದೇ ದಕ್ಷಿಣ ಭಾಗದಲ್ಲಿ ಮಳೆ ಬಂದಾಗ ಮಾತ್ರ ನದಿಗಳು ಹರಿಯುತ್ತವೆ. ಒಂದೆಡೆ ಸದಾ ತುಂಬಿರುವ ಜಲಾಶಯಗಳು, ತುಂಬಿ ಹರಿಯುವ ಕಾಲುವೆಗಳು ಇದ್ದರೆ. ಇನ್ನೊಂದೆಡೆ ಒಣಗಿ ನಿಂತ ಕಾಲುವೆ, ಕೆರೆ, ಜಲಾಶಯಗಳನ್ನು ನೋಡಬಹುದು. ಈ ವಿಪರ್ಯಾಸವನ್ನು ತಡೆಯಲು ಕೇಂದ್ರ ಸರ್ಕಾರವು ಒಂದು ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಅದೇ ನದಿಗಳ ಜೋಡಣೆ. ಇದರಿಂದ ಭಾರತದಲ್ಲಿರುವ ಬರ ಪೀಡಿತ ಪ್ರದೇಶಗಳನ್ನು ಸಹ ಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದು. ಇದರಿಂದ ಹಿಮಾಲಯದಲ್ಲಿ ಹುಟ್ಟಿ ವರ್ಷ ಪೂರ್ತಿ ಹರಿದು ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ನೀರನ್ನು, ಸದ್ಬಳಕೆ ಮಾಡಿಕೊಂಡು ದೇಶದ ಎಷ್ಟೋ ಪ್ರದೇಶಗಳ ಕುಡಿಯುವ ಮತ್ತು ವ್ಯವಸಾಯದ ನೀರಿನ ಬವಣೆಯನ್ನು ತಪ್ಪಿಸಬಹುದು.
Written by: Sakthi S

Translated by: Deepak M

ನದಿಗಳ ಜೋಡಣೆಗೆ ಮಾನವೀಯತೆ ಮತ್ತು ಅತ್ಯಂತ ಪಾಮುಖ್ಯತೆಯನ್ನು ನೀಡಲಾಗಿರುವ “ರಾಷ್ಟ್ರೀಯ ಯೋಜನೆ” ಎಂಬ ಕೀರ್ತಿ ಇರುವುದು ಸಹಜ. ಇದು ಸ್ವತಃ ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದಾಗಿ, ಪರಿಸರಕ್ಕೆ ಸಂಬಂಧಿಸಿದ ಹಲವು ಇಲಾಖೆಗಳ ಒಪ್ಪಿಗೆಯನ್ನು ಸುಲಭವಾಗಿ ಪಡೆಯಬಹುದು. ಆದರೆ ಹಾಗೆಂದು ಇದು ನಿಜವಾಗಿಯೂ ಇಡೀ ದೇಶಕ್ಕೆ ಒಳ್ಳೆಯದು ಮಾಡುತ್ತದೆ ಎಂದು ನಂಬಲು ಸಾಧ್ಯವೇ. ಏಕೆಂದರೆ ಇದರಿಂದ ಎಷ್ಟು ಒಳ್ಳೆಯದು ಆಗುತ್ತದೆಯೋ, ಅಷ್ಟೇ ಕೆಟ್ಟದ್ದು ಸಹ ಸಂಭವಿಸುವ ಅಪಾಯ ಇರುತ್ತದೆ. ನದಿಗಳ ಜೋಡಣೆಯಿಂದ ಪರಿಸರದ ಮೆಲೆ ಉಂಟಾಗುವ ಹಾನಿಯನ್ನು ಈ ಯೋಜನೆಯನ್ನು ರಚಿಸಿರುವವರು ಮರೆ ಮಾಚುತ್ತಿರುವುದು ಸತ್ಯ. ಏಕೆಂದರೆ ಇಂತಹ ಮಹಾ ಯೋಜನೆಗಳ ದುಷ್ಪರಿಣಾಮಗಳನ್ನು ಊಹಿಸುವುದು ಸಹ ಕಷ್ಟ.

ನದಿಗಳು ಭೂಮಿಯ ಉದಯದೊಂದಿಗೆ ಕಾಣಿಸಿಕೊಂಡಿರಬಹುದು. ಓಡುವ ನದಿ ಸಾಗರವ ಸೇರಬೇಕು ಎಂಬುದು ಕವಿವಾಣಿಯಾದರೂ, ವಾಸ್ತವವಾಗಿ ಎಲ್ಲಾ ನದಿಗಳು ಸಾಗರವನ್ನು ಸೇರುವುದಿಲ್ಲ. ಕೆಲವೊಂದು ನದಿಗಳು ಕ್ಯಾಸ್ಪಿಯನ್ ಮತ್ತು ಅರಲ್ ಸಮುದ್ರಗಳಂತಹ ಒಳನಾಡು ಸಮುದ್ರಗಳನ್ನು ಸೇರಬಹುದು. ಇವುಗಳನ್ನು ಗಾತ್ರದ ದೃಷ್ಟಿಯಿಂದ ಸಮುದ್ರ ಎಂದು ಕರೆಯಲಾಗುತ್ತದೆಯೇ ಹೊರತು, ಇವು ಮೂಲತಃ ಸರೋವರಗಳಾಗಿರುತ್ತವೆ. ಪ್ರಕೃತಿಯನ್ನು ಎಷ್ಟೇ ಕಷ್ಟಪಟ್ಟರೂ ಅರ್ಥ ಮಾಡಿಕೊಳ್ಳುವುದು ಕಷ್ಟ.

ಪ್ರತಿ ನದಿಯು ತನ್ನದೇ ಆದ ಜೈವಿಕ ವ್ಯವಸ್ಥೆಯನ್ನು ಹೊಂದಿರುತ್ತದೆ. ಅದರಲ್ಲಿ ತನ್ನದೇ ಆದ ಜೀವಿಗಳು ಆವಾಸಸ್ಥಾನವನ್ನಾಗಿ ಮಾಡಿಕೊಂಡು ಜೀವಿಸುತ್ತಿರುತ್ತವೆ. ಇಂತಹ ನದಿಗಳನ್ನು ಕಾಲುವೆಗಳ ಮೂಲಕ ಒಂದನ್ನೊಂದು ಜೋಡಿಸಿದರೆ, ಈ ಜೀವಿಗಳು ಸಹ ಬೇರೆ ನದಿಗಳ ಜೀವಿಗಳ ಜೊತೆಗೆ ಸೆಣಸಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಉಂಟಾಗುವ ಹಾನಿಯನ್ನು ಊಹೆ ಮಾಡುವುದು ಕಷ್ಟ. ಇದು ವಿನಾಶಕಾರಿಯಾದ ಯೋಜನೆಯಾಗಿ ಮಾನವ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರಿರುವುದನ್ನು ನಾವು ಈಗಾಗಲೇ ಕೆಲವು ನಿದರ್ಶನಗಳ ಮೂಲಕ ಕಂಡುಕೊಂಡಿದ್ದೇವೆ.

1950- 60 ರ ಸುಮಾರಿನಲ್ಲಿ ಅಂದಿನ ಸೋವಿಯತ್ ಗಣರಾಜ್ಯದ ಭಾಗವಾಗಿದ್ದ ಅರಲ್ ಸಮುದ್ರಕ್ಕೆ ಹಲವಾರು ನದಿಗಳು ಬಂದು ಸೇರುತ್ತಿದ್ದವು. ಅಗ ಸೋವಿಯತ್ ಗಣರಾಜ್ಯವು ಆ ನದಿಗಳ ದಿಕ್ಕನ್ನು ಬದಲಿಸಿ, ಬರ ಮತ್ತು ಶುಷ್ಕ ಹವಾಮಾನ ಇರುವ ಪ್ರದೇಶಗಳತ್ತ ಹರಿಸಿ ಅದನ್ನು ಹಸಿರುಗೊಳಿಸಲು ಆರಂಭಿಸಿತು. ಅರಲ್ ಸಮುದ್ರವು ಒಂದು ಸರೋವರ ಮಾತ್ರವಾಗಿತ್ತು. ಇದರ ಗಾತ್ರದ ಕಾರಣದಿಂದಾಗಿ ಇದನ್ನು ಸಮುದ್ರ ಎಂದು ಕರೆಯಲಾಗುತ್ತಿತ್ತು. ಹೀಗೆ ಆರಂಭವಾದ ಈ ನದಿಗಳ ದಿಕ್ಕು ಬದಲಿಸುವಿಕೆ ಯೋಜನೆಯ ಕಾರಣದಿಂದಾಗಿ ಅಷ್ಟು ದೊಡ್ಡ ಅರಲ್ ಸಮುದ್ರವು ಇಂದು ತನ್ನ ಮೂಲ ಗಾತ್ರದ 10% ಗಾತ್ರವನ್ನು ಮಾತ್ರ ಉಳಿದುಕೊಂಡಿದೆ. ಈ ಸಮುದ್ರವನ್ನು ನಂಬಿಕೊಂಡು ಬದುಕಿದ್ದ ಮೀನುಗಾರರು ಬೀದಿ ಪಾಲಾದರು. ಸರಿ ದಿಕ್ಕು ಬದಲಿಸಿ ಮರುಭೂಮಿಗಳಿಗೆ ಹರಿದ ನದಿಗಳಿಂದ ಆ ದೇಶವು ಉತ್ತಮ ಹತ್ತಿಯ ಇಳುವರಿಯನ್ನು ಆರಂಭಿಸಿತು. ಇದರಿಂದ ಹತ್ತಿಯ ಉತ್ಪಾದನೆಯಲ್ಲಿ ಆ ದೇಶ ಮುಂಚೂಣಿ ಸ್ಥಾನ ಗಳಿಸಿತು. ಆದರೆ ಕ್ರಮೇಣ ಆ ಇಳುವರಿಯು ಸಹ ಕುಂಠಿತಗೊಂಡಿತು. ಹರಿಯುವ ನದಿ ನೀರು ಮರುಭೂಮಿಯ ಬಿಸಿಲಿಗೆ ಸಿಕ್ಕಿ ಒಣಗಲು ಆರಂಭಿಸಿತು. ಕಾಲುವೆಗಳು ಒಡೆದು ನೀರು ವ್ಯರ್ಥವಾಯಿತು. ಹೀಗೆ ಇಡೀ ಯೋಜನೆಯೇ ವೈಫಲ್ಯವನ್ನು ಅನುಭವಿಸಿತು. ಕೊನೆಗೆ ಒಂದು ದಿನ ಯುನೆಸ್ಕೋ ಸಂಸ್ಥೆಯವರು ಅರಲ್ ಸಮುದ್ರ ತಿರುವು ಯೋಜನೆಯನ್ನು “ವಿಶ್ವ ಕಂಡ ಅತ್ಯಂತ ದೊಡ್ಡ ಪ್ರಾಕೃತಿಕ ವಿಕೋಪ” ಎಂದು ಬಣ್ಣಿಸಿತು. ಹೀಗೆ ಮಾನವ ನಿರ್ಮಿತ “ಪ್ರಾಕೃತಿಕ ವಿಕೋಪ”ವೊಂದು ನಡೆದು ಹೋಯಿತು.

ಆದರೆ ದುರಂತ ಸಂಭವಿಸಿದ ನಂತರ, ಈಗ ಕಝಕ್‌ಸ್ಥಾನ್ ಮತ್ತು ಉಜ್ಬೇಕಿಸ್ಥಾನ್ ದೇಶಗಳು ಅರಲ್ ಸಮುದ್ರವನ್ನು ಪುನಃಶ್ಚೇತನಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ದುರದೃಷ್ಟ ಏನಪ್ಪಾ ಎಂದರೆ, ಈ ಅರಲ್ ಸಮುದ್ರವನ್ನು ಈಗ “ಅರಲ್‍ಕುಮ್ ಮರುಭೂಮಿ” ಎಂದು ಕರೆಯಲಾಗುತ್ತಿದೆ.

ಮನುಷ್ಯನ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಅದರಲ್ಲೂ ನದಿ ತಿರುವುಗಳಂತಹ ಯೋಜನೆಗೆ ಮೊದಲು ಹಾಳಾಗುವುದು ಕಾಡುಗಳು. ಏಕೆಂದರೆ ಈ ಯೋಜನೆಗೆ ಕಾಲುವೆಗಳು, ಜಲಾಶಯಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇವುಗಳಿಗೆ ಜಾಗವನ್ನು ಹೊಂದಿಸಲು ಹಲವಾರು ಕಾಡುಗಳು ನಿರ್ನಾಮವಾಗುವುದು ಸತ್ಯ. ಆ ಕಾಡುಗಳನ್ನು ನಂಬಿಕೊಂಡ ವನ್ಯಜೀವಿಗಳು ಏನಾಗಬಹುದು ಎಂದು ನೀವೇ ಊಹಿಸಿ. ಇನ್ನು ಯೋಜನೆ ಪ್ರದೇಶದಿಂದ ಕಾಲ್ತೆಗೆಯುವ ವನ್ಯಜೀವಿಗಳು ಮಾನವ ವಾಸವಿರುವ ಪ್ರದೇಶಗಳತ್ತ ಬರುವುದು ಸಹಜ. ಆಗ ಮಾನವ-ಪ್ರಾಣಿಯ ಸಂಘರ್ಷಗಳು ಹೆಚ್ಚಾಗುತ್ತವೆ. ಆದರೆ ಅದೃಷ್ಟವಶಾತ್ ಭಾರತವು ಅಮೆರಿಕಾ, ಮೆಕ್ಸಿಕೋ, ಕೊಲಂಬಿಯಾ, ಈಕ್ವೆಡಾರ್, ಪೆರು, ವೆನೆಜುವೆಲಾ, ಬ್ರೆಜಿಲ್, ಕಾಂಗೊ, ದಕ್ಷಿಣ ಆಫ್ರಿಕಾ, ಮಡಗಾಸ್ಕರ್, ಮಲೇಷಿಯಾ, ಇಂಡೋನೇಷಿಯಾ, ಫಿಲಿಪೈನ್ಸ್, ಪಪುವಾ ನ್ಯೂ ಗಿನಿಯಾ, ಚೀನಾ ಮತ್ತು ಆಸ್ಟ್ರೇಲಿಯಾದಂತಹ 12 ಪ್ರಾಕೃತಿಕ ವೈವಿಧ್ಯಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

ಈ ಯೋಜನೆಯು ಒಂದು ಸಿದ್ಧಾಂತದ ಪ್ರಕಾರ ದೇಶದ ಸಾಮಾಜಿಕ-ಆರ್ಥಿಕ ಅಸಮತೋಲನವನ್ನು ಉಂಊ ಮಾಡಬಹುದು. ಹಿನ್ನೀರು ಬಂದು ನಿಲ್ಲುವ ಪ್ರದೇಶಗಳಲ್ಲಿ ವಾಸಿಸುವ ಬಡ ಜನರನ್ನು ಬಲವಂತವಾಗಿ ಇದಕ್ಕಾಗಿ ಒಕ್ಕಲೆಬ್ಬಿಸಲಾಗುತ್ತದೆ. ನಮ್ಮ ಅಭಿವೃದ್ಧಿಗಾಗಿ ಪ್ರಾಕೃತಿಯನ್ನು ಬಂಡವಳಾ ಮಾಡಿಕೊಳ್ಳುವುದು ನಿಜಕ್ಕೂ ಒಳ್ಳೆಯದಲ್ಲ. ಪ್ರಾಕೃತಿ ವರವಾಗಿ ನಮಗೆ ನೀಡಿರುವುದನ್ನು, ನಾವು ದುರುಪಯೋಗ ಮಾಡಿಕೊಂಡರೆ ಅದು ಶಾಪವಾಗುವುದು ಸಹಜ. ಮಾನವರ ಉದ್ಧಾರಕ್ಕೆ ಯೋಜನೆ ಮಾಡುವುದು ಎಷ್ಟು ಮುಖ್ಯವೋ, ಆ ನದಿಗಳಲ್ಲಿ ಇರುವ ಜೀವಿಗಳ ಬಗ್ಗೆ ಚಿಂತಿಸಬೇಕಾದ ಕರ್ತ್ಯವ್ಯ ಸಹ ನಮ್ಮ ಮೇಲೆ ಇದೆ ಎಂಬುದನ್ನು ಮರೆಯಬಾರದು. ಏಕೆಂದರೆ ಈ ದೇಶದಲ್ಲಿ ನಮಗೆ ಹೇಗೆ ಜೀವಿಸುವ ಹಕ್ಕಿದೆಯೋ, ಹಾಗೆಯೇ ಒಂದು ಚಿಟ್ಟೆ, ಸಣ್ಣ ಇರುವೆ ಮತ್ತು ಆನೆಗಳಿಗೂ ಸಹ ಜೀವಿಸುವ ಸ್ವಾತಂತ್ರ್ಯವಿದೆ ಎಂಬುದನ್ನು ನಾವು ಮರೆಯಬಾರದು. ಆಗಲೇ ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿ ಉಳಿಯುವುದು. ಈ ಯೋಜನೆ ಕೈಗೆತ್ತಿಕೊಳ್ಳುವ ಮೊದಲು ಇಡೀ ದೇಶದಲ್ಲಿ ಸ್ವಚ್ಛಂಧವಾಗಿ ಓಡಾಡಿಕೊಂಡಿರುವ ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ಯೋಚಿಸಿ. ಹೊಸ ನದಿ ಮತ್ತು ಕಾಲುವೆಗಳು ಬಂದರೆ, ಅವುಗಳ ಓಡಾಟ ಹೇಗೆ ಆಗುತ್ತದೆ ಎಂಬುದನ್ನು ಊಹಿಸಿ. ಹೀಗೇ ಆದಲ್ಲಿ ಇನ್ನು ನೂರು ವರ್ಷಗಳಲ್ಲಿ ಈ ಪ್ರಾಣಿಗಳು ನಿರಾಶ್ರಿತರಂತೆ ವನ್ಯಜೀವಿಧಾಮಗಳಲ್ಲಿ ಮತ್ತು ಅಭಯಾರಣ್ಯಗಳಲ್ಲಿ ಇರಬೇಕಾಗಿ ಬರಬಹುದು. ಇದನ್ನೇ ಆಲ್ಬರ್ಟ್ ಐನ್‌ಸ್ಟೈನ್ ಸರಿಯಾಗಿ ಹೇಳಿದ್ದಾರೆ “ಭೂಮಿಯ ಮೇಲಿಂದ ಜೇನು ನೊಣ ಕಾಣೆಯಾದ ದಿನದಿಂದ, ಮನುಷ್ಯ ಕೇವಲ ನಾಲ್ಕು ವರ್ಷ ಮಾತ್ರ ಬದುಕಬಹುದು”.

ಅಭಿವೃದ್ಧಿಗಾಗಿ ಪರಿಸರವನ್ನು ಹಾಳು ಮಾಡುವುದು ಒಂದೇ, ಆತ್ಮಹತ್ಯೆ ಮಾಡಿಕೊಳ್ಳುವುದು ಸಹ ಒಂದೇ.

ಉಲ್ಲೇಖಗಳು:
http://mowr.gov.in/schemes-projects-programmes/schemes/interlinking-rivers
https://www.indiatvnews.com/news/india-pm-modi-rs-5-5-lakh-crore-river-linking-project-ambitious-plan-deal-with-droughts-floods-400170
https://www.downtoearth.org.in/coverage/the-debate-on-interlinking-rivers-in-india-13496
https://timesofindia.indiatimes.com/india/govt-may-declare-inter-state-river-linking-projects-as-national-projects/articleshow/62544432.cms
https://www.jagranjosh.com/general-knowledge/advantages-and-disadvantages-of-interlinking-rivers-in-india-1506409679-1
https://www.geoecomar.ro/website/publicatii/Nr.19-2013/12_mehta_web_2013.pdf

Leave a Reply

Your email address will not be published. Required fields are marked *